ರಾಜ್ಯದಲ್ಲಿ ಆಸ್ತಿ ನೋಂದಣಿ, ಖಾತಾ ಬದಲಾವಣೆ ಸೇರಿದಂತೆ ವಿವಿಧ ಸೇವೆಗಳಿಗಾಗಿ ಬಳಸಲಾಗುತ್ತಿರುವ ‘ಇ-ಸ್ವತ್ತು 2.0’ (E-Swathu 2.0) ತಂತ್ರಾಂಶದಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಅಡೆತಡೆಗಳನ್ನು ಸರಿಪಡಿಸಲಾಗಿದ್ದು, ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಚುರುಕುಗೊಂಡಿದೆ.
ರಾಜ್ಯದಾದ್ಯಂತ ಇ-ಸ್ವತ್ತು 2.0 ತಂತ್ರಾಂಶದಡಿ ಸ್ವೀಕರಿಸುತ್ತಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು, ಇಲ್ಲಿಯವರೆಗೂ ಒಟ್ಟು 1,40,719 ಅರ್ಜಿಗಳನ್ನು ಅನುಮೋದಿಸಿ, ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಹೊಸ ನಮೂನೆ 11-ಬಿ (Form 11-B) ಅಡಿಯಲ್ಲಿ ಈವರೆಗೆ 82,640 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳು ವಿವಿಧ ಹಂತಗಳಲ್ಲಿ ಅನುಮೋದನೆಗಾಗಿ ಕಾಯುತ್ತಿವೆ. ಈ ಬಾಕಿ ಉಳಿದಿರುವ ಅರ್ಜಿಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
E-Swathu 2.0 ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ:
ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ (Citizen Interface) ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸುವಾಗ ಸಾರ್ವಜನಿಕರು ಹಾಗೂ ಅರ್ಜಿಗಳನ್ನು ಅನುಮೋದಿಸುವಾಗ ಅಧಿಕಾರಿಗಳು (ಗ್ರಾಮ ಪಂಚಾಯತಿ ಬಳಕೆದಾರರು) ಎದುರಿಸುತ್ತಿದ್ದ ಹಲವು ತಾಂತ್ರಿಕ ಸಮಸ್ಯೆಗಳನ್ನು ಇದೀಗ ಬಗೆಹರಿಸಲಾಗಿದೆ. ತಂತ್ರಾಂಶದಲ್ಲಿ ಮಾಡಲಾದ ಪ್ರಮುಖ 9 ಬದಲಾವಣೆಗಳು ಈ ಕೆಳಗಿನಂತಿವೆ:
- ಹೊಸ ಬಡಾವಣೆಗಳಿಗೆ ಅನುಮೋದನೆ: ಹೊಸ ಬಡಾವಣೆಗಳಿಗೆ (ಲೇಔಟ್) ಅರ್ಜಿಗಳನ್ನು ಸಲ್ಲಿಸಲು ಈಗ ಗ್ರಾಮ ಪಂಚಾಯತಿ ಹಂತದಲ್ಲೇ ಅವಕಾಶ ನೀಡಲಾಗಿದೆ. ಈವರೆಗೆ 2,238 ಹೊಸ ಬಡಾವಣೆಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಆ ಪೈಕಿ 998 ಲೇಔಟ್ಗಳಿಗೆ ಗ್ರಾ.ಪಂ ಹಂತದಲ್ಲೇ ಅನುಮೋದನೆ ನೀಡಲಾಗಿದೆ.
- ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ: ನಮೂನೆ–11ಬಿ ಖಾತೆಗಳನ್ನು ನಮೂನೆ–11ಎ ಖಾತೆಗಳಾಗಿ ಸುಲಭವಾಗಿ ಪರಿವರ್ತನೆ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಹಂತದಲ್ಲಿಯೇ ಅವಕಾಶ ಕಲ್ಪಿಸಲಾಗಿದೆ.
- ಅಪಾರ್ಟ್ಮೆಂಟ್ಗಳಿಗೆ ಅವಕಾಶ: ಹೊಸ ಬಹುಮಹಡಿ ಕಟ್ಟಡಗಳಿಗೆ (ಅಪಾರ್ಟ್ಮೆಂಟ್) ಇ-ಸ್ವತ್ತು ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದೆ.
- ಅಳತೆ ಪರಿವರ್ತನೆ ಸೌಲಭ್ಯ: ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿ ಸಲ್ಲಿಸುವಾಗ, ಜಾಗದ ವಿಸ್ತೀರ್ಣವನ್ನು ಗುಂಟೆ ಮತ್ತು ಸೆಂಟ್ಸ್ನಿಂದ ಚದರ ಮೀಟರ್ಗೆ (Sq. Meters) ಆಟೋಮ್ಯಾಟಿಕ್ ಆಗಿ ಪರಿವರ್ತಿಸಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಲಾಗಿದೆ.
- ಇಸಿ (EC) ಅಪ್ಲೋಡ್: ಸಿಟಿಜನ್ ಇಂಟರ್ಫೇಸ್ ಮೂಲಕ ಋಣಭಾರ ಪ್ರಮಾಣಪತ್ರಗಳನ್ನು (Encumbrance Certificate – EC) ಸಲ್ಲಿಸುವಾಗ ಉಂಟಾಗುತ್ತಿದ್ದ ತಾಂತ್ರಿಕ ದೋಷಗಳನ್ನು ನಿವಾರಿಸಲಾಗಿದೆ.
- ಸೇವ್ (Save) ಸಮಸ್ಯೆ ಇತ್ಯರ್ಥ: ಆನ್ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡುವಾಗ ಅದನ್ನು ‘Save’ ಮಾಡಲು ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲಾಗಿದೆ.
- ಇ-ಖಾತಾ ಡೌನ್ಲೋಡ್: ಸಿಟಿಜನ್ ಇಂಟರ್ಫೇಸ್ ಮೂಲಕ ಸಾರ್ವಜನಿಕರು ತಮ್ಮ ಇ-ಖಾತಾಗಳನ್ನು ಡೌನ್ಲೋಡ್ (download) ಮಾಡಿಕೊಳ್ಳಲು ಇದ್ದ ಅಡ್ಡಿಗಳನ್ನು ನಿವಾರಿಸಲಾಗಿದೆ.
- ಬೆಸ್ಕಾಂ/ವಿದ್ಯುತ್ ಕಂಪನಿಗಳ ಲಿಂಕಿಂಗ್: ಅರ್ಜಿಗಳನ್ನು ಸಲ್ಲಿಸುವಾಗ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ (ESCOMs) ಮಾಡಲಾಗಿದ್ದ ಸಂಯೋಜನೆಯಲ್ಲಿ ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
- ಅಧಿಕಾರಿಗಳ ಲಾಗಿನ್ ಸಮಸ್ಯೆ: ಇ-ಸ್ವತ್ತು ತಂತ್ರಾಂಶದ ಗ್ರಾಮ ಪಂಚಾಯತಿ ಬಳಕೆದಾರರುಗಳ ಲಾಗಿನ್ನಲ್ಲಿ ಅರ್ಜಿಗಳ ಅನುಮೋದನೆ ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಸಹ ಬಗೆಹರಿಸಲಾಗಿದೆ.
ಪಾಸ್ಪೋರ್ಟ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ:
ಹೊರದೇಶದಲ್ಲಿ ನೆಲೆಸಿರುವ ಭಾರತೀಯರಿಗೆ (NRIs) ಅನುಕೂಲವಾಗುವಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೊರದೇಶದ ಅರ್ಜಿದಾರರು ಇ-ಸ್ವತ್ತು ತಂತ್ರಾಂಶದಲ್ಲಿ ತಮ್ಮ ಪಾಸ್ಪೋರ್ಟ್ (Passport) ಬಳಸಿಕೊಂಡು ಸಿಟಿಜನ್ ಇಂಟರ್ಫೇಸ್ ಮೂಲಕ ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಮುಂದಿನ 10 ದಿನಗಳ ಒಳಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಜೊತೆಗೆ, ಬಳಕೆದಾರರ ಲಾಗಿನ್ನಲ್ಲಿ ಕಂಡುಬರುತ್ತಿರುವ ಇತರೆ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನೂ ತ್ವರಿತವಾಗಿ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಎಲ್ಲಿ ಮಾಡಬಹುದು?
ಸಾರ್ವಜನಿಕರು ಇ-ಸ್ವತ್ತು 2.0 ತಂತ್ರಾಂಶದ ಮೂಲಕ ಆನ್ಲೈನ್ನಲ್ಲಿ (Citizen Interface) ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಡಿಜಿಟಲ್ ಸೌಲಭ್ಯವಿಲ್ಲದ ಸಾರ್ವಜನಿಕರಿಗೆ ಅನುಕೂಲವಾಗುವಂತೆ, ರಾಜ್ಯದಾದ್ಯಂತ ಇರುವ ಗ್ರಾಮ ಪಂಚಾಯತಿಗಳ ‘ಬಾಪೂಜಿ ಸೇವಾ ಕೇಂದ್ರಗಳ’ ಮೂಲಕವೂ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇದರ ಜೊತೆಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ಸಹಯೋಗದೊಂದಿಗೆ, ಇ-ಸ್ವತ್ತು ಅರ್ಜಿಗಳನ್ನು ರಾಜ್ಯದ ಯಾವುದೇ ‘ಗ್ರಾಮ ಒನ್’, ‘ಕರ್ನಾಟಕ ಒನ್’ ಹಾಗೂ ‘ಬೆಂಗಳೂರು ಒನ್’ ಕೇಂದ್ರಗಳ ಮೂಲಕವೂ ಸಲ್ಲಿಸಲು ವಿಸ್ತೃತ ಅವಕಾಶ ಕಲ್ಪಿಸಿದೆ.
LPG New Rules: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಿಯಮಗಳಲ್ಲಿ ಭಾರೀ ಬದಲಾವಣೆ