ಅಡುಗೆ ಅನಿಲ (LPG) ಸಿಲಿಂಡರ್ ಬುಕ್ಕಿಂಗ್ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಮೇ 1 ರಿಂದ ದೇಶಾದ್ಯಂತ ಮಹತ್ವದ (LPG New Rules) ಬದಲಾವಣೆಗಳು ಜಾರಿಗೆ ಬರಲಿವೆ. ಸಬ್ಸಿಡಿ ಗ್ಯಾಸ್ ಕಾಳಸಂತೆಕೋರರ ಪಾಲಾಗುವುದನ್ನು ತಡೆಯಲು ಹಾಗೂ ಅಕ್ರಮ ದಾಸ್ತಾನಿಗೆ ಬ್ರೇಕ್ ಹಾಕಲು ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ 3 ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ.
ಈ ಹೊಸ ನಿಯಮಗಳು ದೇಶದ ಲಕ್ಷಾಂತರ ಗ್ಯಾಸ್ ಗ್ರಾಹಕರ ದೈನಂದಿನ ಬುಕ್ಕಿಂಗ್ ಪ್ರಕ್ರಿಯೆಯ ಮೇಲೆ ನೇರ ಪ್ರಭಾವ ಬೀರಲಿವೆ. ಆ ಪ್ರಮುಖ 3 ಬದಲಾವಣೆಗಳ ಸಂಪೂರ್ಣ ವಿವರ ಇಲ್ಲಿದೆ:
1. ಸಿಲಿಂಡರ್ ಬುಕ್ಕಿಂಗ್ ಅವಧಿಗೆ ಕಡಿವಾಣ: ಗ್ರಾಹಕರು ಮನಬಂದಂತೆ ಪದೇ ಪದೇ ಗ್ಯಾಸ್ ಬುಕ್ ಮಾಡುವಂತಿಲ್ಲ. ನಗರ ಪ್ರದೇಶಗಳಲ್ಲಿ ಎರಡು ಸಿಲಿಂಡರ್ ಬುಕ್ಕಿಂಗ್ಗಳ ನಡುವಿನ ಕನಿಷ್ಠ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಈ ಅಂತರವನ್ನು ಬರೋಬ್ಬರಿ 45 ದಿನಗಳಿಗೆ ನಿಗದಿಪಡಿಸಲಾಗಿದೆ.
ಒಂದು ವೇಳೆ ಗ್ರಾಹಕರು ನಿಗದಿತ ದಿನಗಳಿಗಿಂತ ಮುಂಚಿತವಾಗಿ ಬುಕ್ ಮಾಡಲು ಪ್ರಯತ್ನಿಸಿದರೆ, ಸಾಫ್ಟ್ವೇರ್ ವ್ಯವಸ್ಥೆಯು ಆ ಬುಕ್ಕಿಂಗ್ ಅನ್ನು ಸ್ವಯಂಚಾಲಿತವಾಗಿ (Automatically) ತಡೆಹಿಡಿಯಲಿದೆ.
2. ಒಟಿಪಿ (OTP) ನೀಡಿದರಷ್ಟೇ ಸಿಲಿಂಡರ್ ಡೆಲಿವರಿ: ಮೇ 1 ರಿಂದ ‘ಡೆಲಿವರಿ ಅಥೆಂಟಿಕೇಶನ್ ಕೋಡ್’ (DAC) ಕಡ್ಡಾಯವಾಗಲಿದೆ. ಇನ್ನು ಮುಂದೆ ಡೆಲಿವರಿ ಬಾಯ್ಗೆ ಕೇವಲ ಗ್ಯಾಸ್ ಬುಕ್ ಅಥವಾ ರಶೀದಿ ತೋರಿಸಿ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲ. ಗ್ರಾಹಕರು ಗ್ಯಾಸ್ ಬುಕ್ ಮಾಡಿದಾಗ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನೆಯಾಗುತ್ತದೆ.
ಸಿಲಿಂಡರ್ ತರುವ ಸಿಬ್ಬಂದಿಗೆ ಆ ಒಟಿಪಿ ನೀಡಿದರಷ್ಟೇ ಗ್ಯಾಸ್ ನಿಮ್ಮ ಕೈಸೇರಲಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಈಗಾಗಲೇ ಶೇ. 94.5 ರಷ್ಟು ಎಲ್ಪಿಜಿ ವಿತರಣೆಯನ್ನು ಈ ಸುರಕ್ಷಿತ ಕೋಡ್ ಮೂಲಕವೇ ಮಾಡಲಾಗುತ್ತಿದೆ.
3. ಉಜ್ವಲ ಫಲಾನುಭವಿಗಳಿಗೆ ಇ-ಕೆವೈಸಿ (e-KYC) ಕಡ್ಡಾಯ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವ ಫಲಾನುಭವಿಗಳು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು (e-KYC) ಮಾಡಿಸುವುದು ಕಡ್ಡಾಯವಾಗಿದೆ. ಈವರೆಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದವರು ಕೂಡಲೇ ತಮ್ಮ ವಿತರಕರನ್ನು (Gas Agency) ಸಂಪರ್ಕಿಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಬೆಲೆ ಏರಿಕೆ ಭೀತಿ ಹಾಗೂ ಪೂರೈಕೆ ಸವಾಲು: ಒಂದೆಡೆ ನಿಯಮಗಳು ಬಿಗಿಯಾಗುತ್ತಿದ್ದರೆ, ಮತ್ತೊಂದೆಡೆ ಸಿಲಿಂಡರ್ ಬೆಲೆ ಏರಿಕೆಯ ಭೀತಿಯೂ ಎದುರಾಗಿದೆ. ಇರಾನ್-ಇಸ್ರೇಲ್-ಅಮೆರಿಕ ನಡುವಿನ ಜಾಗತಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು 60 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಜೊತೆಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯೂ ಮೂರು ಬಾರಿ ಏರಿಕೆ ಕಂಡಿದೆ. ಹೀಗಾಗಿ ಮೇ 1 ರಂದು ದರ ಪರಿಷ್ಕರಣೆಯಾಗುವ ಸಾಧ್ಯತೆ ದಟ್ಟವಾಗಿದೆ.
ಭಾರತಕ್ಕೆ ಪ್ರತಿದಿನ ಸುಮಾರು 80,000 ಟನ್ ಎಲ್ಪಿಜಿ ಅಗತ್ಯವಿದ್ದು, ನಮ್ಮ ದೇಶೀಯ ಉತ್ಪಾದನೆ ಕೇವಲ 46,000 ಟನ್ ಇದೆ. ಉಳಿದ ಕೊರತೆ ನೀಗಿಸಲು ತೈಲ ಕಂಪನಿಗಳು ಅಮೆರಿಕದಿಂದ ಹೆಚ್ಚುವರಿ ಗ್ಯಾಸ್ ಆಮದು ಮಾಡಿಕೊಳ್ಳುತ್ತಿದ್ದು, ಜೂನ್-ಜುಲೈ ವೇಳೆಗೆ ಭಾರತ ತಲುಪುವ ನಿರೀಕ್ಷೆಯಿದೆ.
ಗ್ರಾಹಕರು ಮಾಡಬೇಕಾದ್ದೇನು?: ಈ ಹೊಸ ನಿಯಮಗಳು ಜಾರಿಗೆ ಬರುವ ಮುನ್ನ, ಗ್ರಾಹಕರು ತಮ್ಮ ಎಲ್ಪಿಜಿ ಖಾತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು. ಮೊಬೈಲ್ ನಂಬರ್ ಇಲ್ಲದೆ ಒಟಿಪಿ ಬರುವುದಿಲ್ಲ, ಒಟಿಪಿ ಇಲ್ಲದೆ ಗ್ಯಾಸ್ ಸಿಗುವುದಿಲ್ಲ. ತಮ್ಮ ಮುಂದಿನ ಬುಕ್ಕಿಂಗ್ ದಿನಾಂಕವನ್ನು ಗ್ರಾಹಕರು ‘MyLPG’ ಪೋರ್ಟಲ್ನಲ್ಲಿ ಪರಿಶೀಲಿಸಿಕೊಳ್ಳಬಹುದು.