ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ ಜಾರಿಯಾದ ಬಳಿಕ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಂಟಾಗುತ್ತಿರುವ ವಿಪರೀತ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ.
ರಾಜ್ಯಾದ್ಯಂತ ನಾಲ್ಕೂ ಸಾರಿಗೆ ನಿಗಮಗಳಿಗೆ ಹಂತ-ಹಂತವಾಗಿ ಒಟ್ಟು 5,000 ಹೊಸ ಬಸ್‌ಗಳನ್ನು ಖರೀದಿಸಿ ಸೇರ್ಪಡೆಗೊಳಿಸಲಾಗುವುದು ಎಂದು ನೂತನ ಸಾರಿಗೆ ಸಚಿವ ಬೈರತಿ ಸುರೇಶ್ ಪ್ರಕಟಿಸಿದ್ದಾರೆ.
ಇತ್ತಿಚೆಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅಧಿಕೃತವಾಗಿ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಕೇಂದ್ರ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಾರಿಗೆ ಇಲಾಖೆಯ ಮುಂಬರುವ ಆಡಳಿತಾತ್ಮಕ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.
ಉಚಿತ ‘Shakti Smart Card’:
ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಮತ್ತಷ್ಟು ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಮತ್ತು ಪ್ರಯಾಣಿಕರ ನಿಖರವಾದ ಟ್ರ್ಯಾಕಿಂಗ್‌ಗಾಗಿ ರಾಜ್ಯದ ಸುಮಾರು 3 ಕೋಟಿಗೂ ಅಧಿಕ ಮಹಿಳಾ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್ (Shakti Smart Card)’ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಇಷ್ಟು ಬೃಹತ್ ಪ್ರಮಾಣದಲ್ಲಿ ಕಾರ್ಡ್‌ಗಳ ತಯಾರಿಕೆ ಅಗತ್ಯವಿರುವುದರಿಂದ ಜಾಗತಿಕ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಮುನ್ನ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಇದರ ವಿತರಣೆ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
4,000 ಎಲೆಕ್ಟ್ರಿಕ್ ಮತ್ತು 1,000 ಸಾಮಾನ್ಯ ಬಸ್‌ಗಳ ಖರೀದಿ:
ಸಾರಿಗೆ ಸಚಿವರ ಮಾಹಿತಿ ಪ್ರಕಾರ, ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 40 ರಷ್ಟು ಗಣನೀಯ ಹೆಚ್ಚಳ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ವಾಯವ್ಯ ಸಾರಿಗೆ ನಿಗಮಗಳಿಗೆ ಸಮಾನವಾಗಿ ಹೊಸ ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು.
ಒಟ್ಟು 5,000 ಹೊಸ ಬಸ್‌ಗಳ ಪೈಕಿ 1,000 ಸಾಮಾನ್ಯ ಬಸ್‌ಗಳನ್ನು ರಾಜ್ಯ ಸರ್ಕಾರದ ಸ್ವಂತ ನಿಧಿಯ ಮೂಲಕ ನೇರವಾಗಿ ಖರೀದಿಸಲಾಗುತ್ತದೆ. ಇನ್ನುಳಿದ 4,000 ಅತ್ಯಾಧುನಿಕ ಎಲೆಕ್ಟ್ರಿಕ್ (ಇ-ಬಸ್) ಬಸ್‌ಗಳನ್ನು ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಪಡೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಪುರುಷರಿಗೂ ಸಿಗಲಿದೆ ಮೆಟ್ರೋ ಮಾದರಿ ರಿಚಾರ್ಜ್ ಕಾರ್ಡ್:
ಇದೇ ವೇಳೆ ಪುರುಷ ಪ್ರಯಾಣಿಕರಿಗೂ ಸಾರಿಗೆ ಇಲಾಖೆ ವಿಶೇಷ ಸೌಲಭ್ಯವೊಂದನ್ನು ನೀಡಿದೆ. ಬೆಂಗಳೂರಿನ ‘ನಮ್ಮ ಮೆಟ್ರೋ’ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿಯೇ ಪುರುಷರಿಗೂ ಸಹ ನಿಗದಿತ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದಾದ ಮತ್ತು ಹಣ ಖಾಲಿಯಾದ ನಂತರ ರೀಚಾರ್ಜ್ ಮಾಡಿಕೊಳ್ಳಬಹುದಾದ ವಿಶೇಷ ಸ್ಮಾರ್ಟ್ ಕಾರ್ಡ್‌ಗಳನ್ನು ಒದಗಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು.
ಮಹಿಳಾ ಸುರಕ್ಷತೆಗೆ ವೆಹಿಕಲ್ ಟ್ರ್ಯಾಕಿಂಗ್ ಕಡ್ಡಾಯ:
ನಿರ್ಭಯ ಯೋಜನೆಯಡಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಖಾಸಗಿ ವಾಣಿಜ್ಯ ಪ್ರಯಾಣಿಕರ ವಾಹನಗಳಾದ ಟ್ಯಾಕ್ಸಿ ಹಾಗೂ ಕಾರುಗಳಲ್ಲಿ ‘ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಅಳವಡಿಕೆಯನ್ನು ಚುರುಕುಗೊಳಿಸಲು ಕಟ್ಟುನಿಟ್ಟಿನ ಗಡುವು ನೀಡಲಾಗಿದೆ.
ಈಗಾಗಲೇ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ವಾಹನಗಳಿಗೆ ಈ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇನ್ನುಳಿದ 4 ರಿಂದ 5 ಲಕ್ಷ ವಾಹನಗಳಿಗೆ ಮುಂದಿನ 3 ರಿಂದ 4 ತಿಂಗಳ ಒಳಗಾಗಿ ವಿಎಲ್‌ಟಿಎಸ್ ಅಳವಡಿಕೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಆದೇಶಿಸಿದ್ದಾರೆ.
ಈ ಮಹತ್ವದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಸಾರಿಗೆ ಆಯುಕ್ತ ಸೆಲ್ವಮಣಿ ಸೇರಿದಂತೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಕೇಳಗಿನ ಸುದ್ದಿಗಳನ್ನು ಓದಿ:
ಏರ್‌ಟೆಲ್ ವಿದ್ಯಾರ್ಥಿವೇತನ 2026: ಉಚಿತ ಲ್ಯಾಪ್‌ಟಾಪ್, 100% ಶುಲ್ಕ ವಿನಾಯಿತಿ
ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್‌ಲೈನ್ ಅರ್ಜಿ ಆಹ್ವಾನ