ರಾಜ್ಯ ರಾಜಕಾರಣದಲ್ಲಿನ ನಾಯಕತ್ವ ಬದಲಾವಣೆ ಚರ್ಚೆಗಳಿಗೆ ಅಂತಿಮ ತೆರೆ ಬಿದ್ದಿದ್ದು, ಸಿದ್ದರಾಮಯ್ಯ ಅವರು ಗುರುವಾರ (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಮಧ್ಯಾಹ್ನ ಲೋಕಭವನಕ್ಕೆ (ರಾಜಭವನ) ತೆರಳಿದ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಖಾಸಗಿ ಕಾರ್ಯದ ನಿಮಿತ್ತ ರಾಜ್ಯದಿಂದ ಹೊರಗಿರುವ (ಮಧ್ಯಪ್ರದೇಶಕ್ಕೆ ತೆರಳಿದ್ದಾರೆ) ಕಾರಣ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲಾಯಿತು. ರಾಜ್ಯಪಾಲರು ವಾಪಸಾದ ಬಳಿಕವಷ್ಟೇ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಲಿದೆ.
ಅಭಿಮಾನಿಗಳಲ್ಲಿ ಮಡುಗಟ್ಟಿದ ನೋವು: ಸಿದ್ದರಾಮಯ್ಯ ಅವರು ಕನಿಷ್ಠ 5 ವರ್ಷಗಳ ಕಾಲ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ನಿರೀಕ್ಷಿಸಿದ್ದ ಅವರ ಅಭಿಮಾನಿಗಳಿಗೆ ಈ ರಾಜೀನಾಮೆ ನಿರ್ಧಾರವು ಆಘಾತ ತಂದಿದೆ. ರಾಜ್ಯದ ವಿವಿಧೆಡೆ ಬೆಂಬಲಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ‘ಅಹಿಂದ’ ನಾಯಕನ ಅಧಿಕಾರ ತ್ಯಾಗವು ತಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಸಚಿವರೊಂದಿಗೆ ಕೊನೆಯ ಉಪಾಹಾರ ಸಭೆ: ರಾಜೀನಾಮೆ ಸಲ್ಲಿಸುವ ಮುನ್ನ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಕೊನೆಯ ಉಪಾಹಾರ ಸಭೆಯನ್ನು ಏರ್ಪಡಿಸಿದ್ದರು. ಈ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಅವರು, ಕಳೆದ ಮೂರು ವರ್ಷಗಳ ಆಡಳಿತದಲ್ಲಿ ಸಹಕರಿಸಿದ ಎಲ್ಲಾ ಸಚಿವರಿಗೆ ಧನ್ಯವಾದ ಅರ್ಪಿಸಿದರು.
ರಾಹುಲ್ ಗಾಂಧಿ ಸೇರಿದಂತೆ ದೆಹಲಿ ನಾಯಕರ ಸೂಚನೆಯಂತೆ ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದರು. ಇದೇ ವೇಳೆ, ಸಿದ್ದರಾಮಯ್ಯ ಅವರ ರಾಜಕೀಯ ಹೋರಾಟ ಹಾಗೂ ಸರ್ಕಾರದ ಸಾಧನೆಗಳನ್ನು ನೆನೆದು ಹಲವು ಸಚಿವರು ಭಾವುಕರಾದರು.
ಮುಂದಿನ ಸಿಎಂ ಡಿ.ಕೆ. ಶಿವಕುಮಾರ್: ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಏರುವುದು ಖಚಿತವಾಗಿದೆ. ಉಪಾಹಾರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲುಮುಟ್ಟಿ ಆಶೀರ್ವಾದ ಪಡೆದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯನ್ನು ಶೀಘ್ರದಲ್ಲೇ ಕರೆದು ನೂತನ ನಾಯಕನ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರೊಂದಿಗೆ ನಡೆದ ಸರಣಿ ಸಭೆಗಳ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯನ್ನು ನೀಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಬದಲಾವಣೆ: ಈ ಕೆಲಸ ಮಾಡದಿದ್ದರೆ 2000 ರೂ. ಬಂದ್..?
ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್‌ಲೈನ್ ಅರ್ಜಿ ಆಹ್ವಾನ
SSLC Prize Money 2026: SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ