ರಾಜ್ಯದಾದ್ಯಂತ ಮುಂಗಾರು ಮಳೆ ಮತ್ತಷ್ಟು ಚುರುಕಾಗಿದ್ದು, ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದಾದ್ಯಂತ ಮಳೆಯಾಗುವ ಸಾಧ್ಯತೆ ಇದೆ.
ಭಾರತೀಯ ಹವಾಮಾನ ಇಲಾಖೆಯು ಜುಲೈ 7 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಅತ್ಯಂತ ಭಾರಿ ಮಳೆಯ ‘ರೆಡ್ ಅಲರ್ಟ್‘ ಘೋಷಿಸಿದೆ. ಉಳಿದಂತೆ ರಾಜ್ಯದ ಹಲವೆಡೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ನಾಳೆಯ (ಜುಲೈ 7) ಹವಾಮಾನದ ವಿವರ:
- ರೆಡ್ ಅಲರ್ಟ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು.
- ಆರೆಂಜ್ ಅಲರ್ಟ್: ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು.
- ಭಾರಿ ಮಳೆಯ ಮುನ್ಸೂಚನೆ: ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದೆ. ಇನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭೂಕುಸಿತದ ಮುನ್ನೆಚ್ಚರಿಕೆ:
ಜುಲೈ 7 ರಿಂದ 11 ರವರೆಗೆ ಪಶ್ಚಿಮ ಘಟ್ಟದ ತೀರ ಪ್ರದೇಶಗಳಲ್ಲಿ ಭಾರಿ ಮಳೆಯ ಕಾರಣದಿಂದಾಗಿ ಭೂಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.
ಜುಲೈ 8 ರ ಮಳೆ ಮುನ್ಸೂಚನೆ ಹಾಗೂ ಬೆಂಗಳೂರು ಹವಾಮಾನ:
ಬುಧವಾರದ (ಜುಲೈ 8) ಮಳೆ ವರದಿ: ಬುಧವಾರ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಲಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಭಾರಿ ಮಳೆಯ ಮುನ್ಸೂಚನೆ ಮುಂದುವರಿಯಲಿದೆ. ಜುಲೈ 9 ಮತ್ತು 10 ರ ಬಳಿಕ ಉತ್ತರ ಹಾಗೂ ದಕ್ಷಿಣ ಕರ್ನಾಟಕದಾದ್ಯಂತ ಮಳೆಯ ಪ್ರಮಾಣ ಮತ್ತೆ ಕ್ಷೀಣಿಸಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
ರಾಜಧಾನಿ ಬೆಂಗಳೂರಿನ ಹವಾಮಾನ: ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ತಾಪಮಾನವು ಕನಿಷ್ಠ 21°C ನಿಂದ ಗರಿಷ್ಠ 30°C ವರೆಗೆ ದಾಖಲಾಗುವ ಸಾಧ್ಯತೆಯಿದೆ.
ಶರಾವತಿ ಕಣಿವೆಯಲ್ಲಿ ಮಳೆ ಆರ್ಭಟ: ಜೀವಕಳೆ ಪಡೆದುಕೊಂಡ ಜೋಗ ಜಲಪಾತ
ಶಿವಮೊಗ್ಗ: ಜೋಗ್ಫಾಲ್ಸ್ ಹಾಗೂ ಶರಾವತಿ ಕಣಿವೆ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಆರಿದ್ರಾ ಮಳೆ ಜೋರಾದ ಗಾಳಿಯೊಂದಿಗೆ ತೀವ್ರವಾಗಿ ಅಬ್ಬರಿಸುತ್ತಿದೆ. ಇದರಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಭಾನುವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ 15,376 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟದಲ್ಲಿ 1.40 ಅಡಿಯಷ್ಟು ಏರಿಕೆಯಾಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 1,749.85 ಅಡಿ ತಲುಪಿದೆ. (ಗಮನಿಸಿ: ಕಳೆದ ವರ್ಷ ಇದೇ ಅವಧಿಯಲ್ಲಿ 1,791.20 ಅಡಿ ನೀರಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ 42 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಿದೆ).
ಪ್ರವಾಸಿಗರ ಆಕರ್ಷಣೆಯ ಕೇಂದ್ರ:
ಸಾಮಾನ್ಯವಾಗಿ ಜೂನ್ ಮಧ್ಯಭಾಗದಲ್ಲೇ ಭೋರ್ಗರೆಯುತ್ತಿದ್ದ ವಿಶ್ವವಿಖ್ಯಾತ ಜೋಗ ಜಲಪಾತವು, ಈ ಬಾರಿ ಜುಲೈ ಮೊದಲ ವಾರದವರೆಗೂ ಮಳೆ ಇಲ್ಲದೆ ಸಂಪೂರ್ಣವಾಗಿ ಸೊರಗಿತ್ತು. ಇದರಿಂದಾಗಿ ಜೂನ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು.
ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಲಪಾತವು ಮತ್ತೆ ಭೋರ್ಗರೆಯುತ್ತಿದ್ದು, ಕಳೆಗಟ್ಟಿದೆ. ಮಳೆ ಹೀಗೆಯೇ ಮುಂದುವರಿದರೆ ಪ್ರವಾಸಿಗರ ಹರಿವು ಹೆಚ್ಚಾಗಲಿದ್ದು, ಇದರಿಂದ ಜೋಗದ ವ್ಯಾಪಾರಿಗಳು, ಹೋಂಸ್ಟೇ ಮಾಲೀಕರು, ಗೈಡ್ಗಳು ಹಾಗೂ ಟ್ಯಾಕ್ಸಿ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ: