ರಾಜ್ಯದಲ್ಲಿ ಜುಲೈ 4 ರಿಂದ ಜುಲೈ 9 ರವರೆಗೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟ ಭೀಕರವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಹವಾಮಾನ ಕೇಂದ್ರವು ಆರೆಂಜ್ ಮತ್ತು ರೆಡ್ ಅಲರ್ಟ್ ಎಚ್ಚರಿಕೆಯನ್ನು ನೀಡಿದೆ.
ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಜುಲೈ 6 ರಿಂದ 9 ರವರೆಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದ್ದು, ಸಾರ್ವಜನಿಕರು ತೀವ್ರ ಜಾಗರೂಕರಾಗಿರಲು ಸೂಚಿಸಲಾಗಿದೆ.
ಮಳೆಯ ಮುನ್ಸೂಚನೆಯ ಜೊತೆಗೆ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗಾಳಿಯ ವೇಗ ಗಣನೀಯವಾಗಿ ಹೆಚ್ಚಿರಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಪ್ರಮುಖ ಪ್ರಾದೇಶಿಕ ಮಳೆ ಮುನ್ಸೂಚನೆ ವಿವರಗಳು:
- ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 5 ರಂದು ‘ಆರೆಂಜ್ ಅಲರ್ಟ್’ ಇರಲಿದ್ದು, ಜುಲೈ 6 ರಿಂದ 9 ರವರೆಗೆ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಪ್ರವಾಹ ಭೀತಿಯ ‘ರೆಡ್ ಅಲರ್ಟ್’ ನೀಡಲಾಗಿದೆ.
- ಮಲೆನಾಡಿಗೆ ಸತತ 5 ದಿನ ಆರೆಂಜ್ ಅಲರ್ಟ್: ಮಲೆನಾಡು ಭಾಗದ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಜುಲೈ 5 ರಿಂದ ಮುಂದಿನ 5 ದಿನಗಳ ಕಾಲ ಬಿಟ್ಟುಬಿಡದೆ ಭಾರಿ ಮಳೆಯಾಗಲಿದ್ದು, ಸತತ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
- ಉತ್ತರ ಕರ್ನಾಟಕಕ್ಕೂ ಅಲರ್ಟ್ ಮಿಶ್ರಣ: ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಿಗೆ ಮೊದಲ 3 ದಿನ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಮಿಶ್ರಿತ ಮುನ್ಸೂಚನೆ ಇದ್ದರೆ, 4 ಮತ್ತು 5ನೇ ದಿನ (ಜುಲೈ 7 ಮತ್ತು 8 ರಂದು) ಸಂಪೂರ್ಣವಾಗಿ ‘ಆರೆಂಜ್ ಅಲರ್ಟ್’ ನೀಡಲಾಗಿದೆ.
- ಗದಗ-ಹಾವೇರಿ ಸೇರಿ ಒಳನಾಡಿಗೆ ಯೆಲ್ಲೋ ಅಲರ್ಟ್: ಗದಗ್ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಜುಲೈ 4 ರಂದು ಗಡಿ ಜಿಲ್ಲೆಗಳಾದ ಬೀದರ್ ಮತ್ತು ಕಲಬುರಗಿಗೂ ಯೆಲ್ಲೋ ಅಲರ್ಟ್ ಜಾರಿಯಲ್ಲಿರಲಿದೆ.
- ಬೆಂಗಳೂರಿನಲ್ಲಿ ಮಳೆ ಜೋರಿಲ್ಲ: ರಾಜಧಾನಿ ಬೆಂಗಳೂರು (ನಗರ ಮತ್ತು ಗ್ರಾಮಾಂತರ), ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯಾವುದೇ ಗಂಭೀರ ಹವಾಮಾನ ಎಚ್ಚರಿಕೆ ಇಲ್ಲ. ಇಲ್ಲಿ ಸಾಧಾರಣ ಮಳೆ ಅಥವಾ ಮೋಡ ಕವಿದ ವಾತಾವರಣ ಮಾತ್ರ ಇರಲಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ: