ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಐದು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.
ಇನ್ನುಳಿದ ಎರಡು ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದ್ದರೆ, ಮೈತ್ರಿ ಪಕ್ಷವಾದ ಜೆಡಿಎಸ್ ಅಭ್ಯರ್ಥಿ ಸೋಲನುಭವಿಸುವ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ.
ಕ್ರಾಸ್ ವೋಟಿಂಗ್‌ನಿಂದ ಜೆಡಿಎಸ್‌ಗೆ ಸೋಲು: ವಿಧಾನಸಭೆಯ ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್ 4 ಮತ್ತು ಬಿಜೆಪಿ 2 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರ ಗೆಲುವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಂದ ಆದ ಕ್ರಾಸ್ ವೋಟಿಂಗ್‌ನಿಂದಾಗಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳಿಗೆ ಸೀಮಿತರಾಗಿ ಸೋಲು ಕಂಡರು. ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ 11 ಮತಗಳು ದೊರೆತಿದ್ದು, ಇದರಲ್ಲಿ ಬಿಜೆಪಿಯ ನಾಲ್ವರು ಮತ್ತು ಜೆಡಿಎಸ್‌ನ ಏಳು ಶಾಸಕರ ಮತಗಳು ಸೇರಿವೆ ಎಂದು ವರದಿಯಾಗಿದೆ.
ವಿಧಾನ ಪರಿಷತ್‌ಗೆ ಆಯ್ಕೆಯಾದರು:
- ಕಾಂಗ್ರೆಸ್: ಬಿ.ಕೆ. ಹರಿಪ್ರಸಾದ್ (30 ಮತ), ತಿಪ್ಪಣ್ಣಪ್ಪ ಕಾಮಕನೂರ್ (30 ಮತ), ಪಿ.ವಿ. ಮೋಹನ್ (29 ಮತ), ಬಿ.ಎಸ್. ಶಿವಣ್ಣ ಮಳವಳ್ಳಿ (30 ಮತ), ಮತ್ತು ವಿನಯ್ ಕಾರ್ತಿಕ್ (32 ಮತ).
- ಬಿಜೆಪಿ: ಆರ್. ರಘು (29 ಮತ) ಮತ್ತು ಲಿಂಗರಾಜ್ ಪಾಟೀಲ್ (27 ಮತ).
ಎಲಿಮಿನೇಷನ್ ರೌಂಡ್‌ನಲ್ಲಿ ಬಿಜೆಪಿಗೆ ಗೆಲುವು: ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವಿಗೆ ಮೊದಲ ಪ್ರಾಶಸ್ತ್ಯದಡಿ ಸುಮಾರು 28 ಮತಗಳ ಅಗತ್ಯವಿತ್ತು. ಬಿಜೆಪಿ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಗೆಲುವಿನ ಕೋಟಾ ತಲುಪಲು ವಿಫಲರಾಗಿದ್ದರೂ, ಎಲಿಮಿನೇಷನ್ ರೌಂಡ್‌ನಲ್ಲಿ ಎದುರಾಳಿ ಗೋವಿಂದರಾಜು ಅವರ ಮತಗಳು ಕಡಿಮೆಯಿದ್ದ ಕಾರಣ ಲಿಂಗರಾಜ್ ಪಾಟೀಲ್ ವಿಜಯಶಾಲಿಗಳಾದರು. ಚಲಾವಣೆಯಾದ ಒಟ್ಟು 222 ಮತಗಳ ಪೈಕಿ, ಸಂಖ್ಯೆ ನಮೂದಿಸುವಲ್ಲಿ ತಪ್ಪಾದ ಕಾರಣ ಒಂದು ಮತ ಅಸಿಂಧುವಾಗಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
ಪಿಎಂ ಕಿಸಾನ್ 23 ನೇ ಕಂತಿನ ಹಣವನ್ನು ಬಿಡುಗಡೆ ದಿನಾಂಕ ನಿಗದಿ