Monsoon Rain 2026: ಮುಂಗಾರು ಮಳೆಯ ಆರ್ಭಟ: ಕರಾವಳಿ, ಮಲೆನಾಡಿಗೆ ‘ರೆಡ್ ಅಲರ್ಟ್’, 6 ಜಿಲ್ಲೆಗಳಲ್ಲಿ ಆತಂಕ

Telegram Group Join Now
WhatsApp Group Join Now

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ (Monsoon 2026) ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಜೂನ್ 7 ರಿಂದ ಜೂನ್ 10 ರವರೆಗೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ 6 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ (Red Alert) ಘೋಷಿಸಲಾಗಿದೆ.

ಈ ಭಾಗಗಳಲ್ಲಿ ಕೇವಲ ಧಾರಾಕಾರ ಮಳೆಯಾಗುವುದಷ್ಟೇ ಅಲ್ಲದೆ, ಗಂಟೆಗೆ 50 ಕಿ.ಮೀ.ಗೂ ಅಧಿಕ ವೇಗದಲ್ಲಿ ಬಿರುಗಾಳಿ ಬೀಸುವ ಹಾಗೂ ಬಿಡದೆ ಗುಡುಗು-ಸಿಡಿಲು ಅಪ್ಪಳಿಸುವ ಮುನ್ಸೂಚನೆ ಇದೆ.

ದಿನಾಂಕವಾರು ಮಳೆಯ ಮುನ್ಸೂಚನೆ (Monsoon Rain 2026) ಇಲ್ಲಿದೆ:

  • ಜೂನ್ 7 (ಭಾನುವಾರ): ಇಂದು ರಾಜ್ಯದ ಯಾವುದೇ ಜಿಲ್ಲೆಗೆ ‘ರೆಡ್ ಅಲರ್ಟ್’ ಇರುವುದಿಲ್ಲ. ಆದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ‘ಆರೆಂಜ್ ಅಲರ್ಟ್’ ಇರಲಿದೆ. ಕರಾವಳಿಯಲ್ಲಿ ಬಿರುಗಾಳಿಯ ಅಬ್ಬರ ಇರಲಿದ್ದು, ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ.
  • ಜೂನ್ 8 (ಸೋಮವಾರ): ಮಳೆಯ ಪ್ರಮಾಣ ದಿಢೀರ್ ಏರಿಕೆಯಾಗಲಿದ್ದು, ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ನೀಡಲಾಗಿದೆ. ಇಲ್ಲಿ 200 ಮಿ.ಮೀ.ಗೂ ಅಧಿಕ ಮಳೆ ಸುರಿಯುವ ಅಪಾಯವಿದೆ. ಉಳಿದಂತೆ ರಾಯಚೂರು, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ‘ಆರೆಂಜ್ ಅಲರ್ಟ್’ ಮುಂದುವರಿಯಲಿದೆ.
  • ಜೂನ್ 9 (ಮಂಗಳವಾರ): ಮಳೆಯ ತೀವ್ರತೆ ಮಲೆನಾಡಿಗೂ ವಿಸ್ತರಣೆಯಾಗಲಿದೆ. ಇದರಿಂದಾಗಿ ಉಡುಪಿ, ದಕ್ಷಿಣ ಕನ್ನಡದ ಜೊತೆಗೆ ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗಕ್ಕೂ ‘ರೆಡ್ ಅಲರ್ಟ್’ ಕಂಟಕ ಎದುರಾಗಲಿದೆ. ದಾವಣಗೆರೆ, ಹಾಸನ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಬೆಳಗಾವಿ ಹಾಗೂ ಕೊಡಗಿಗೆ ‘ಆರೆಂಜ್ ಅಲರ್ಟ್’ ಇರಲಿದೆ.
  • ಜೂನ್ 10 (ಬುಧವಾರ): ಭಾರಿ ಮಳೆಯ ಕಾರ್ಮೋಡಗಳು ಉತ್ತರ ಕರ್ನಾಟಕದತ್ತ ಚಲಿಸಲಿವೆ. ಹೀಗಾಗಿ ಮೇಲಿನ 5 ಜಿಲ್ಲೆಗಳ (ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು) ಜೊತೆಗೆ ಬೆಳಗಾವಿ ಜಿಲ್ಲೆಗೂ ‘ರೆಡ್ ಅಲರ್ಟ್’ ಅನ್ವಯವಾಗಲಿದೆ. ಗದಗ, ಧಾರವಾಡ, ಹಾವೇರಿ ಮತ್ತು ಕೊಡಗಿನಲ್ಲಿ ‘ಆರೆಂಜ್ ಅಲರ್ಟ್’ ಇರಲಿದೆ.

ಬೆಂಗಳೂರಿಗರಿಗೆ ಆತಂಕವಿಲ್ಲ: ಕರಾವಳಿಯಲ್ಲಿ ಎದುರಾಗಿರುವ ಈ ಭಾರಿ ಮಳೆಯ ಆತಂಕ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜನತೆಗೆ ಇಲ್ಲ. ಮೈಸೂರು, ತುಮಕೂರು, ಮಂಡ್ಯ, ರಾಮನಗರ, ಹಾಸನ ಹಾಗೂ ಬೆಂಗಳೂರಿನಲ್ಲಿ ಕೇವಲ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಅಧಿಕಾರಿಗಳಿಗೆ ಕಟ್ಟೆಚ್ಚರ, ಜನತೆಗೆ ಕಟ್ಟುನಿಟ್ಟಿನ ಸೂಚನೆ: ಸತತ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುವ ಅಪಾಯವಿದೆ. ಜೊತೆಗೆ ಮಲೆನಾಡು ಭಾಗಗಳಲ್ಲಿ ಗುಡ್ಡ ಕುಸಿಯುವ (Landslides) ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ.

ಈ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ಪಡೆಗಳು ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಸರ್ವಸನ್ನದ್ಧರಾಗಿರುವಂತೆ ಸರ್ಕಾರ ನಿರ್ದೇಶನ ನೀಡಿದೆ. ಸಾರ್ವಜನಿಕರು ಕೂಡ ಈ ದಿನಗಳಲ್ಲಿ ಅಪಾಯಕಾರಿ ನದಿ, ತೊರೆಗಳ ಬಳಿ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ.

ಗೃಹಜ್ಯೋತಿ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ನಿಯಮ

KSP ಸಿವಿಲ್ ಕಾನ್ಸ್‌ಟೇಬಲ್ ನೇಮಕಾತಿ 2026

ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್‌ಲೈನ್‌ ಅರ್ಜಿ ಆಹ್ವಾನ

SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ

Telegram Group Join Now
WhatsApp Group Join Now

Leave a Comment