ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ನಾಳೆ (ಮೇ 28) ಗುಡುಗು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕದ 9 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ. ಬೆಂಗಳೂರು ಹವಾಮಾನ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿಯಂತೆ, ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ತೇವಾಂಶಯುಕ್ತ ಗಾಳಿಯ ಪ್ರಭಾವ ಹಾಗೂ ನೈಋತ್ಯ ಮುಂಗಾರು ಪ್ರವೇಶದ ಮುನ್ಸೂಚನೆಯಿಂದಾಗಿ ಹವಾಮಾನದಲ್ಲಿ ಭಾರಿ ಬದಲಾವಣೆಯಾಗುತ್ತಿದೆ.
ಇದರ ಪರಿಣಾಮವಾಗಿ ರಾಜ್ಯಾದ್ಯಂತ ಮಳೆಯ ಚಟುವಟಿಕೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ವ್ಯಾಪಕ ಮಳೆಯಾಗಲಿದೆ.
9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ:
ನಾಳೆ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಅತಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಈ ಒಂಬತ್ತು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ರಾಜ್ಯದ ಉಳಿದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಕುರಿತು ಅಂದಾಜಿಸಲಾಗಿದೆ. ಇದೇ ವೇಳೆ, ರಾಜಧಾನಿ ಬೆಂಗಳೂರಿನಲ್ಲಿಯೂ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ನಮ್ಮ ಮೆಟ್ರೋ ಸಂಚಾರದ ಮೇಲೂ ವ್ಯತ್ಯಯ ಉಂಟಾಗಿದೆ.
ಗಂಟೆಗೆ 50-60 ಕಿ.ಮೀ. ವೇಗದ ಬಿರುಗಾಳಿ ಎಚ್ಚರಿಕೆ:
ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿಯ ವಾತಾವರಣ ಮುಂದುವರಿಯಲಿದೆ. ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಮೇ 29ರವರೆಗೆ ಗಂಟೆಗೆ 50 ರಿಂದ 60 ಕಿ.ಮೀ. ವೇಗದಲ್ಲಿ ಭಾರಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿಯೂ ನಾಳೆಯವರೆಗೆ ಇದೇ ರೀತಿಯ ವಾತಾವರಣ ಇರಲಿದೆ.
ಮೇ 29 ರಿಂದ ಮೇ 31 ರವರೆಗೆ ಗಾಳಿಯ ವೇಗ ಕೊಂಚ ತಗ್ಗಿದರೂ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
ವಿದ್ಯಾರ್ಥಿಗಳಿಗೆ ₹35 ಸಾವಿರ ಪ್ರೋತ್ಸಾಹಧನ; ಆನ್‌ಲೈನ್ ಅರ್ಜಿ ಆಹ್ವಾನ
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಬದಲಾವಣೆ: ಈ ಕೆಲಸ ಮಾಡದಿದ್ದರೆ 2000 ರೂ. ಬಂದ್..?
SSLC Prize Money 2026: SSLC ಪಾಸಾದ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನ