ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಹಾಗೂ ನೇಕಾರಿಕೆ ಆಧಾರಿತ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
2026-27 ನೇ ಸಾಲಿನ ‘ನೇಕಾರ ಸಮ್ಮಾನ್ ಯೋಜನೆ’ಯಡಿ ವಾರ್ಷಿಕ 5,000 ರೂ. ಆರ್ಥಿಕ ಸಹಾಯಧನ ಪಡೆಯಲು ಕೈಮಗ್ಗ ಮತ್ತು ಜವಳಿ ಇಲಾಖೆಯು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಯಾರೆಲ್ಲಾ ಈ ಯೋಜನೆಗೆ ಅರ್ಹರು?
- ಹಳೆಯ ಫಲಾನುಭವಿಗಳು: ಕಳೆದ 2025-26ನೇ ಸಾಲಿನಲ್ಲಿ ಈಗಾಗಲೇ ಈ ಯೋಜನೆಯ ಸೌಲಭ್ಯ ಪಡೆದಿರುವ ನೇಕಾರರು ಪ್ರಸ್ತುತ ವರ್ಷವೂ ನೆರವು ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಮೃತಪಟ್ಟವರು, ವೃತ್ತಿ ಬಿಟ್ಟವರು ಹಾಗೂ ಬೇರೆ ಪ್ರದೇಶಗಳಿಗೆ ವಲಸೆ ಹೋದವರನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ.
- ಹೊಸಬರಿಗೆ ಅವಕಾಶ: ಕಳೆದ ವರ್ಷ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಈ ಬಾರಿ ಹೊಸದಾಗಿ ಅರ್ಜಿ ಸಲ್ಲಿಸಲು ಸುವರ್ಣಾವಕಾಶ ಕಲ್ಪಿಸಲಾಗಿದೆ.
ವಿಮೆ ನೋಂದಣಿ ಕಡ್ಡಾಯ:
ಸಹಾಯಧನ ಪಡೆಯಬಯಸುವ ನೇಕಾರರು ಪ್ರಸ್ತುತ ನೇಕಾರಿಕೆ ವೃತ್ತಿಯಲ್ಲೇ ಮುಂದುವರಿದಿರಬೇಕು ಎಂಬುದು ಪ್ರಮುಖ ಷರತ್ತು. ಇದರ ಜೊತೆಗೆ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಅಥವಾ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿಯಲ್ಲಿ ಕಡ್ಡಾಯವಾಗಿ ವಿಮೆ ನೋಂದಣಿ ಮಾಡಿಸಿರಬೇಕು.
Nekara Samman Yojane 2026 ಬೇಕಾಗುವ ದಾಖಲೆಗಳು:
ಹೊಸದಾಗಿ ನೋಂದಣಿ ಮಾಡಿಕೊಳ್ಳುವ ನೇಕಾರರು ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಈ ಕೆಳಗಿನ ದಾಖಲೆಗಳ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯ.
- ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ (ರೇಷನ್ ಕಾರ್ಡ್).
- ನೇಕಾರ ಸಮ್ಮಾನ್ ಐಡಿ ಅಥವಾ ಪೆಹಚಾನ್ ಕಾರ್ಡ್.
- ನೇಕಾರರ ಅಧಿಕೃತ ಗುರುತಿನ ಚೀಟಿ (ID Card).
- ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿ.
- ತಾವು ನೇಕಾರಿಕೆ ಕಸುಬಿನಲ್ಲಿ ತೊಡಗಿಕೊಂಡಿರುವಾಗ ತೆಗೆಸಿದ ಇತ್ತೀಚಿನ ಭಾವಚಿತ್ರ (Photo).
- PMJJBY ಅಥವಾ PMSBY ವಿಮಾ ಯೋಜನೆಗೆ ಒಳಪಟ್ಟಿರುವ ಕುರಿತಾದ ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ವಿಮೆ ನವೀಕರಣದ (Renewal) ರಶೀದಿ.
ಅರ್ಜಿ ಸಲ್ಲಿಕೆ ಹೇಗೆ? ಮತ್ತು ಎಲ್ಲಿ?
ಅರ್ಹ ಫಲಾನುಭವಿಗಳು ತಮ್ಮ ಸಂಪೂರ್ಣ ವಿವರಗಳೊಂದಿಗೆ ಸ್ಥಳೀಯ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿ ಅಥವಾ ನೇಕಾರರ ಸಹಕಾರ ಸಂಘಗಳ ಮುಖಾಂತರ ಅರ್ಜಿಗಳನ್ನು ತಲುಪಿಸಬಹುದು.
ಚಿತ್ರದುರ್ಗ ವ್ಯಾಪ್ತಿಯ ನೇಕಾರರು, ಬಿ.ಡಿ. ರಸ್ತೆಯ ಯೂನಿಯನ್ ಪಾರ್ಕ್ ಹತ್ತಿರ, ಮಸೀದಿ ಪಕ್ಕದಲ್ಲಿರುವ “ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ”ಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 20-07-2026 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಗೊಂದಲಗಳ ಪರಿಹಾರಕ್ಕಾಗಿ ಕಚೇರಿಯ ಅಧಿಕೃತ ದೂರವಾಣಿ ಸಂಖ್ಯೆ 08194-221426 ಗೆ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕೇಳಗಿನ ಸುದ್ದಿಗಳನ್ನು ಓದಿ:
ಗೃಹಲಕ್ಷ್ಮಿ, ಗೃಹಜ್ಯೋತಿ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ: ಸಿಎಂ ಡಿಕೆಶಿ ಹೊಸ ರೂಲ್ಸ್
ಗೃಹಲಕ್ಷ್ಮಿ ಯೋಜನೆ ರದ್ದತಿ ವದಂತಿಗೆ ಬ್ರೇಕ್: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ