ಮುಂಬೈ: ಭಾರತಕ್ಕೆ 2024ರ ಟಿ20 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ʼಹಿಟ್‌ಮ್ಯಾನ್ʼ ರೋಹಿತ್ ಶರ್ಮಾ (Rohit Sharma) ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅತ್ಯುನ್ನತ ಗೌರವ ನೀಡಿದೆ. 2026ರಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ಅವರನ್ನು ಅಧಿಕೃತ ‘ಬ್ರಾಂಡ್ ಅಂಬಾಸಿಡರ್’ (Brand Ambassador) ಆಗಿ ನೇಮಕ ಮಾಡಲಾಗಿದೆ.
ಟಿ20 ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ಐಸಿಸಿ ರೋಹಿತ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಐಸಿಸಿ ಹೇಳಿದ್ದೇನು? ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ ಈ ಟೂರ್ನಿಗೆ ರೋಹಿತ್ ಶರ್ಮಾ ಸೂಕ್ತ ರಾಯಭಾರಿ ಎಂದು ಐಸಿಸಿ ಬಣ್ಣಿಸಿದೆ. “2007 ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗಿ ಮತ್ತು 2024 ರಲ್ಲಿ ನಾಯಕನಾಗಿ ಕಪ್ ಗೆದ್ದಿರುವ ರೋಹಿತ್, ಟಿ20 ಕ್ರಿಕೆಟ್‌ನ ಐಕಾನ್,” ಎಂದು ಐಸಿಸಿ ಪ್ರಶಂಸಿಸಿದೆ.
ಇದೇ ವೇಳೆ ಐಸಿಸಿ 2026ರ ವಿಶ್ವಕಪ್ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ. 2026ರ ಫೆಬ್ರವರಿ 7 ರಂದು ಭಾರತ vs ಯುಎಸ್‌ಎ ಪಂದ್ಯದೊಂದಿಗೆ ಮುಂಬೈನಲ್ಲಿ ಟಿ20 ವಿಶ್ವಕಪ್ ಟೂರ್ನಿ ಚಾಲನೆಯಾಗಲಿದೆ.
- ಆರಂಭ: ಫೆಬ್ರವರಿ 7, 2026 ರಂದು ಟೂರ್ನಿ ಶುರುವಾಗಲಿದ್ದು, ಫೈನಲ್ ಪಂದ್ಯ ಮಾರ್ಚ್ 8 ರಂದು ನಡೆಯಲಿದೆ.
- ಭಾರತ vs ಪಾಕ್ ಪಂದ್ಯ: ಕ್ರಿಕೆಟ್ ಜಗತ್ತು ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 15 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ.
ರೋಹಿತ್ ಶರ್ಮಾ ರಾಯಭಾರಿಯಾಗಿರುವುದು ಮತ್ತು ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದು ಭಾರತೀಯ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಇತರೆ ಮಾಹಿತಿಗಳನ್ನು ಓದಿ: