ರಾಜ್ಯದಲ್ಲಿ ಮಳೆರಾಯ ಮತ್ತೆ ಕೃಪೆ ತೋರಿದ್ದಾನೆ. ಬರೋಬ್ಬರಿ 20 ದಿನಗಳ ಬಿಡುವಿನ ಬಳಿಕ ಮುಂಗಾರು ಮಳೆ ಮತ್ತೆ ಬಿರುಸುಗೊಂಡಿದ್ದು, ಮುಂದಿನ ಒಂದು ವಾರಗಳ ಕಾಲ ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ 13 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಹವಾಮಾನ ಎಚ್ಚರಿಕೆ: ಹವಾಮಾನ ಇಲಾಖೆಯು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಿರುವ ತಕ್ಷಣದ ಅಲರ್ಟ್ ಪ್ರಕಾರ, ಮುಂಬರುವ ಮೂರು ಗಂಟೆಗಳಲ್ಲಿ ಬೀದರ್, ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಜೂನ್ 22-23 ರಂದು ಯಾವ ಜಿಲ್ಲೆಗಳಲ್ಲಿ ಮಳೆ? ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದೆ. ವಿಶೇಷವಾಗಿ ಜೂನ್ 22 ಮತ್ತು 23ರಂದು ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಶಿವಮೊಗ್ಗ, ವಿಜಯನಗರ, ಹಾಸನ, ಕೊಡಗು ಹಾಗೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಹೀಗಾಗಿ ಜೂನ್ 23ರಂದು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ವಿಭಾಗವಾರು ಒಂದು ವಾರದ ಮಳೆ ಮುನ್ಸೂಚನೆ:
- ಕರಾವಳಿ ಕರ್ನಾಟಕ: ಮುಂಜಾನೆಯಿಂದಲೇ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದೆ. ಜೂನ್ 21 ರಿಂದ 27ರವರೆಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸತತವಾಗಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಜಾರಿಯಲ್ಲಿರಲಿದೆ.
- ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಕಲಬುರಗಿ ಮತ್ತು ಯಾದಗಿರಿ ಭಾಗಗಳಲ್ಲಿ ಜೂನ್ 22 ಹಾಗೂ 25ರಂದು ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
- ದಕ್ಷಿಣ ಒಳನಾಡು: ಜೂನ್ 22, 23 ಹಾಗೂ 25ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ವರುಣನ ಆರ್ಭಟ ಇರಲಿದೆ.
ಬೆಂಗಳೂರು ಹವಾಮಾನ ವರದಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ 24 ರಿಂದ 48 ಗಂಟೆಗಳ ಕಾಲ ಭಾಗಶಃ ಮೋಡ ಮುಚ್ಚಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯ ಹೊತ್ತಿಗೆ ಮೋಡಗಳು ದಟ್ಟವಾಗಿ, ನಗರದ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಈ ಕೇಳಗಿನ ಸುದ್ದಿಗಳನ್ನು ಓದಿ: