ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸುಳಿಗಾಳಿ ಹಾಗೂ ವಾಯುಭಾರ ಕುಸಿತದ ಪರಿಣಾಮವಾಗಿ, ಮುಂಗಾರು ಪ್ರವೇಶಕ್ಕೂ ಮುನ್ನವೇ ರಾಜ್ಯದ ಹಲವೆಡೆ ಬಿರುಸಿನ ಪೂರ್ವ ಮುಂಗಾರು ಮಳೆಯಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಮೇ 11 ರವರೆಗೆ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮಳೆಗೆ ಕಾರಣವೇನು?: ಆಗ್ನೇಯ ಅರಬ್ಬಿ ಸಮುದ್ರ ಹಾಗೂ ಲಕ್ಷದ್ವೀಪದ ಸಮೀಪ, ಕೇರಳ ಕರಾವಳಿಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದು ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದವರೆಗೆ ಹರಡಿದೆ. ಇದರಿಂದಾಗಿ ಕರ್ನಾಟಕದ ಒಳನಾಡಿನ ಮೂಲಕ ಹಾದುಹೋಗುವ ಮಾರುತಗಳಲ್ಲಿ ಏರುಪೇರಾಗಿದ್ದು, ಮಳೆಯ ಪ್ರಮಾಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆಯ ಅಬ್ಬರ?: ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು, ಹಾಗೂ ಉತ್ತರ ಒಳನಾಡಿನ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ (ಮೇ 8ರಂದು) ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆಗಳ ಕಾಲ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಆ ನಂತರ ಸಾಧಾರಣ ಮಳೆಯಾಗಲಿದೆ. ಇದರ ಜೊತೆಗೆ ಮೈಸೂರು, ಮಂಡ್ಯ, ಹಾಸನ, ಕೊಪ್ಪಳ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಮಳೆಯಾಗುವ ನಿರೀಕ್ಷೆಯಿದೆ.
ಈ ಮಳೆಯ ಅವಧಿಯಲ್ಲಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಎಚ್ಚರಿಕೆ ನೀಡಿದೆ.
ಬೆಂಗಳೂರು ಹವಾಮಾನ ಹೇಗಿರಲಿದೆ?: ಸಿಲಿಕಾನ್ ಸಿಟಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮುಂದಿನ 24 ರಿಂದ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡಿನಲ್ಲಿ ಮುಂದುವರಿಯಲಿದೆ ಬಿಸಿಲು ಒಂದೆಡೆ ಮಳೆಯಾಗುತ್ತಿದ್ದರೂ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಈ ಭಾಗಗಳಲ್ಲಿ ತಾಪಮಾನವು 38 ರಿಂದ 40 ಡಿಗ್ರಿ ಸೆಲ್ಸಿಯಸ್ವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಅಕಾಲಿಕ ಮಳೆಗೆ ನೆಲಕಚ್ಚಿದ ಬೆಳೆ: ಬೇಸಿಗೆಯ ಮಳೆ ಸಾಮಾನ್ಯ ಜನರಿಗೆ ತಂಪೆರೆದಿದ್ದರೆ, ಕಟಾವಿಗೆ ಬಂದಿದ್ದ ಬೆಳೆ ನಾಶವಾಗಿ ರೈತರಿಗೆ ಆತಂಕ ತಂದೊಡ್ಡಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ, ಕುಣೆಬೆಳಕೇರಿ, ಮಲೆಬೆನ್ನೂರು ಹಾಗೂ ಕುಂಬಳೂರು ಸುತ್ತಮುತ್ತ ಬುಧವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಸುಮಾರು 30 ಎಕರೆಯಷ್ಟು ಭತ್ತದ ಬೆಳೆ ನೆಲಕಚ್ಚಿದೆ. ಇದರಿಂದ ಅಂದಾಜು 5 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
E-Swathu 2.0: ಇ-ಸ್ವತ್ತು ಅರ್ಜಿಗಳ ವಿಲೇವಾರಿಗೆ ವೇಗ: ಸಚಿವ ಪ್ರಿಯಾಂಕ್ ಖರ್ಗೆ