ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಕೃಷಿ ಇಲಾಖೆ ಆಸರೆಯಾಗಿ ನಿಂತಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಸಿಗುವ ‘ಟಾರ್ಪಾಲಿನ್’ (ತಾಡಪತ್ರಿ) ಇದೀಗ ರೈತರಿಗೆ ಅತಿ ಕಡಿಮೆ ದರದಲ್ಲಿ ಸಹಾಯಧನದೊಂದಿಗೆ ಲಭ್ಯವಾಗಲಿದೆ.
ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ‘ಟಾರ್ಪಾಲಿನ್ ಸಹಾಯಧನ ಯೋಜನೆ-2026’ ಅಡಿಯಲ್ಲಿ ಅರ್ಹ ರೈತರಿಗೆ ಭಾರೀ ರಿಯಾಯಿತಿಯಲ್ಲಿ ಟಾರ್ಪಾಲಿನ್ ವಿತರಿಸಲು ಮುಂದಾಗಿದೆ.
ರೈತರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳುವುದು ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವನ್ನು ತಡೆಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
Tarpaulin Subsidy Scheme: ಯಾರಿಗೆ ಎಷ್ಟು ಸಬ್ಸಿಡಿ?
ಸರ್ಕಾರವು ರೈತರನ್ನು ಎರಡು ವರ್ಗಗಳಾಗಿ ವಿಂಗಡಿಸಿ, ಸಹಾಯಧನವನ್ನು ನಿಗದಿಪಡಿಸಿದೆ:
- ಪರಿಶಿಷ್ಟ ಜಾತಿ ಮತ್ತು ಪಂಗಡ (SC/ST): ಈ ವರ್ಗದ ರೈತರಿಗೆ ಬರೋಬ್ಬರಿ ಶೇ. 90ರಷ್ಟು ಸಹಾಯಧನ ನೀಡಲಾಗುತ್ತಿದೆ. ಅಂದರೆ, ಟಾರ್ಪಾಲಿನ್ನ ಮೂಲ ಬೆಲೆಯಲ್ಲಿ ರೈತರು ಕೇವಲ 10% ಹಣ ಪಾವತಿಸಿದರೆ ಸಾಕು. ಇದು ಬಹುತೇಕ ಉಚಿತವಾಗಿಯೇ ಸಿಕ್ಕಂತಾಗುತ್ತದೆ.
- ಸಾಮಾನ್ಯ ವರ್ಗದ ರೈತರಿಗೆ: ಇತರೆ ಎಲ್ಲಾ ವರ್ಗದ ರೈತರಿಗೆ ಶೇ. 50ರಷ್ಟು ಸಬ್ಸಿಡಿ ಲಭ್ಯವಿದೆ. ಮಾರುಕಟ್ಟೆ ದರದ ಅರ್ಧ ಬೆಲೆಗೆ ಗುಣಮಟ್ಟದ ಟಾರ್ಪಾಲಿನ್ ರೈತರ ಕೈ ಸೇರಲಿದೆ.
ಟಾರ್ಪಾಲಿನ್ ಅಳತೆ ಮತ್ತು ಗುಣಮಟ್ಟ:
ಕೃಷಿ ಇಲಾಖೆಯು ವಿತರಿಸುತ್ತಿರುವ ಟಾರ್ಪಾಲಿನ್ಗಳು ಉತ್ತಮ ಗುಣಮಟ್ಟದ್ದಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತವೆ.
- ಅಳತೆ: 8 ಮೀಟರ್ ಉದ್ದ ಮತ್ತು 6 ಮೀಟರ್ ಅಗಲ (8×6 Mtrs).
- ಉಪಯೋಗ: ಕಟಾವು ಮಾಡಿದ ಬೆಳೆ ರಕ್ಷಣೆ, ಕಣದಲ್ಲಿ ಧಾನ್ಯ ಒಣಗಿಸಲು, ಕೃಷಿ ಹೊಂಡದ ಲೈನಿಂಗ್, ಕೃಷಿ ಉಪಕರಣಗಳಿಗೆ ಶೆಡ್ ನಿರ್ಮಿಸಲು ಹಾಗೂ ಸಾಗಾಣಿಕೆ ವೇಳೆ ಬೆಳೆ ರಕ್ಷಣೆಗೆ ಇದು ಅತ್ಯಗತ್ಯ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?:
ಈ ಯೋಜನೆಯ ಲಾಭ ಪಡೆಯಲು ರೈತರು ಕೆಳಕಂಡ ಮಾನದಂಡಗಳನ್ನು ಪೂರೈಸಿರಬೇಕು:
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
- ಸ್ವಂತ ಜಮೀನು ಹೊಂದಿರಬೇಕು ಅಥವಾ ಲೀಸ್ ಆಧಾರದ ಮೇಲೆ ಕೃಷಿ ಮಾಡುತ್ತಿರಬೇಕು.
- ಕೃಷಿ ಇಲಾಖೆಯ FRUITS ಪೋರ್ಟಲ್ನಲ್ಲಿ ನೋಂದಾಯಿತ ರೈತರಾಗಿರಬೇಕು.
- ಷರತ್ತು: ಕಳೆದ 3 ವರ್ಷಗಳಲ್ಲಿ ಸರ್ಕಾರದ ಇದೇ ಯೋಜನೆಯಡಿ ಟಾರ್ಪಾಲಿನ್ ಸೌಲಭ್ಯ ಪಡೆದಿರಬಾರದು.
ಬೇಕಾಗುವ ದಾಖಲೆಗಳು:
ಅರ್ಜಿ ಸಲ್ಲಿಸಲು ರೈತ ಸಂಪರ್ಕ ಕೇಂದ್ರಕ್ಕೆ ಹೋಗುವಾಗ ಈ ದಾಖಲೆಗಳನ್ನು ಮರೆಯದೇ ಒಯ್ಯಿರಿ:
- ಆಧಾರ್ ಕಾರ್ಡ್ ಪ್ರತಿ.
- ಇತ್ತೀಚಿನ ಪಹಣಿ (RTC).
- ಬ್ಯಾಂಕ್ ಪಾಸ್ಬುಕ್ ಮೊದಲ ಪುಟದ ಪ್ರತಿ.
- ಜಾತಿ ಪ್ರಮಾಣ ಪತ್ರ (SC/ST ರೈತರಿಗೆ ಮಾತ್ರ).
- ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಅರ್ಜಿ ಎಲ್ಲಿ ಸಲ್ಲಿಸಬೇಕು?:
ಇದು ಆನ್ಲೈನ್ ಪ್ರಕ್ರಿಯೆಯಲ್ಲ. ರೈತರು ನೇರವಾಗಿ ತಮ್ಮ ಹೋಬಳಿ ಅಥವಾ ತಾಲೂಕು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ (Raitha Samparka Kendra – RSK) ಭೇಟಿ ನೀಡಿ, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ‘ಸ್ವೀಕೃತಿ ರಸೀದಿ’ ಪಡೆಯಲು ಮರೆಯಬೇಡಿ.
ಆಯ್ಕೆ ಪ್ರಕ್ರಿಯೆ: ಫಲಾನುಭವಿಗಳನ್ನು ಸಾಮಾನ್ಯವಾಗಿ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ (First Come First Serve) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ಅರ್ಜಿಗಳು ಹೆಚ್ಚಾದರೆ, ಲಾಟರಿ ಮೂಲಕ ಆಯ್ಕೆ ನಡೆಯಲಿದೆ.
ವಿಶೇಷ ಸೂಚನೆ: ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಹಂತ-ಹಂತವಾಗಿ ವಿತರಣೆ, ರೈತರು ತಮ್ಮ ತಾಲೂಕು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಬೆಳೆ ರಕ್ಷಣೆಗಾಗಿ ಕಡಿಮೆ ದರದಲ್ಲಿ ಟಾರ್ಪಾಲಿನ್ ಪಡೆಯಲು ಇಂದೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ!
ಇತರೆ ಮಾಹಿತಿಗಳನ್ನು ಓದಿ:
ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ